Tuesday, 30 August 2011

ಗೆಳೆಯನ ನೆನಪು

ಸದ್ದು ನಿದ್ದೆಹೋಗಿ ಮೌನ ಎದ್ದು ನಿಂತಿತ್ತು
ಅಂಧಕಾರವು ಬೆಳಕನ್ನು ಮೆಟ್ಟಿ ನಿಂತಿತ್ತು
ಮನಸಿಗೆ ಮಂಕು ಕವಿದು ಸುಮ್ಮನೆ ಮಲಗಿತ್ತು
ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು .

ಗೆಳೆಯನ ನೆನಪುಗಳು  ಮನ ಕಲಕುತಿತ್ತು
ಆಡಿ ನಲಿದ ದಿನಗಳು ಕಣ್ಣೆದುರು ನಿಂತಿತ್ತು
ಮನಸ್ಸು ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿತ್ತು
ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು .

ಬರಸಿಡಿಲು ಎದೆಗೆ ಅಪ್ಪಳಿಸಿದಂತಿತ್ತು
ಬಿರುಗಾಳಿಗೆ ಸಿಲುಕಿ ತತ್ತರಿಸಿದಂತಿತ್ತು
ಗೆಳೆಯನಿಲ್ಲದ ಜೀವನ ಇನ್ನೇಕೆ ಎಂದೆನ್ನಿಸಿತ್ತು
ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು
                                             ಆರ್. ಆರ್. ಅಶಾಪುರ್

Friday, 26 August 2011

ಇಂದಾದರು ನೀನು ಬರಬಾರದೇನು

ಬೆಳದಿಂಗಳ ಬಾನಲ್ಲಿ ಕಂಡ ಚಂದ್ರ ಮುಖಿ
ಕನಸಲ್ಲಿ ನಗುತ ಕಾಡುವ ಹಸನ್ಮುಖಿ
ಕಣ್ಣೆದುರು ಎಂದು ಬರುವೆ ನನ್ನ ಪ್ರಾಣ ಸಖಿ

ಸೂರ್ಯ ಮುಳುಗುವ ಹೊತ್ತು
ಇಬ್ಬರು ಜೊತೆಯಾಗಿ ಕೂತು
ಆಡೋಣ ನೂರೆಂಟು ಮಾತು
ಎಂದು ಕನಸಲ್ಲಿ ನೀ ನನಗಿತ್ತ ಮಾತು
ನಂಬಿ ನಿನ್ನ ದಾರಿ ಕಾದಿರುವೆ ನಾನು
ಇಂದಾದರು ನೀನು ಬರಬಾರದೇನು

ಮಳೆ ಸುರಿಯುವ ಸಮಯ
ನಾ ಬಂದು ನಿನ್ನ  ಸನಿಹ
ತಿಳಿಸುವೆ ಮನದ ಬಯಕೆಯ
ಎಂದು ಕನಸಲ್ಲಿ ನೀ ಕೊಟ್ಟ ಭಾಷೆಯ
ನಂಬಿ ನಿನ್ನ ದಾರಿ ಕಾದಿರುವೆ ನಾನು
ಇಂದಾದರು ನೀನು ಬರಬಾರದೇನು

                                         ಆರ್. ಆರ್. ಅಶಾಪುರ್

Monday, 22 August 2011

ಸ್ವತಂತ್ರ ಭಾರತ

ಸ್ವತಂತ್ರ ಭಾರತಕ್ಕೆ ಅರವತ್ನಾಲ್ಕು ವರುಷ
ಇನ್ನೂ ಬಿಸಿಲು ಕುದುರೆಯಂತಿದೆ  ಜನರ ಬದುಕಲ್ಲಿ ಹರುಷ |

ನಾಯಕರ ಹುಸಿ ಭರವಸೆ ಯಿಂದ ದುಃಖ ಅತಿಯಾಗಿದೆ 
ಸಮುದ್ರದಂತ ಪ್ರತಿ ಕಣ್ಣಲ್ಲಿ ಕಣ್ಣೀರೆ ಅಲೆಯಾಗಿದೆ
ದುಷ್ಟ ನಾಯಕರು ಕೊಚ್ಚಿಹೋಗುವಂತೆ
ಸಮುದ್ರದಾಳದಿಂದ ಸುನಾಮಿ ಹೊರಬೀಳಬೇಕಿದೆ ||

ದೇಶದೆಲ್ಲೆಡೆ ಬ್ರಷ್ಟತೆಯ ಕಂಡು ಮನಗಳು  ನೊಂದಿವೆ 
ಬೆಂಕಿಉಂಡೆಯಂತ ಮನಗಳಲ್ಲಿ  ನಿಟ್ಟುಸಿರೆ ಜ್ವಾಲೆ ಯಾಗಿದೆ
ಬ್ರಷ್ಟ ನಾಯಕರು ಸುಟ್ಟು ಹೋಗುವಂತೆ
ಜ್ವಾಲೆ ಜ್ವಾಲೆಯಿಂದ ಬೆಂಕಿ ಮಳೆ ಸುರಿಯಬೇಕಿದೆ  ||
                                   
                                       ಆರ್ ಆರ್ ಆಶಾಪುರ್

Tuesday, 16 August 2011

ಸಮಾನತೆಯ ಆಸೆ


ಜಗಕೆ ಅರಿವೆಂಬ ಮಳೆಸುರಿದು
ಜನರ ಮಸ್ತಕದಿ ಜಿನುಗಲಿ
ಅಸಮಾನತೆಯ ಕಳೆ ತೆಗೆದು
ಸಮಾನತೆಯ ಬೆಳೆ ಬೆಳೆಯಲಿ ||

ಅತಿವೃಷ್ಟಿ ಯಾಗಿ ಅಂತಸ್ತು ಕರಗಿ
ನಗನಾಣ್ಯವೆಲ್ಲ ಹರಿದಂಚಿ ಹೋಗಿ
ಬರಡಾದ ಬಡವನಂಗಳದಿ
ಸಿರಿತನದ ಮೊಳಕೆ ಹೊಡೆಯಲಿ ||

ಜಾತಿಬೇದವು ನೆರೆಯಲ್ಲಿ ಮುಳುಗಿ
ಮೂಢಾಚಾರವು ನೀರಲ್ಲಿ ಕರಗಿ
ರಸಋಷಿಯ ವಿಶ್ವಮಾನವ ಕನಸು
ಇಂದಿಗಾದರು ನನಸಾಗಲಿ ||

                                ಆರ್. ಆರ್. ಅಶಾಪುರ್

Thursday, 11 August 2011

ಸುಳ್ಳು ಪ್ರೀತಿ

ಸಂತೋಷದ  ನನ್ನ ಬದುಕಿನಲಿ
ಪ್ರೀತಿ ಮಾಡಿ ನಾ ಹಾಳಾದೆ
ನಗುವೇ ದೂರಾಗಿ ದುಖಃವು ಜೊತೆಯಾಗಿ
ಏಕಾಂಗಿ ನಾ ಆಗ್ಹೋದೆ ||

ಎಲ್ಲಿಂದ್ಲೋ ನೀನು ಸನಿಹಕೆ ಬಂದು
ಪ್ರೀತಿಯ ಖಡ್ಗವ ತಂದೆ
ಹುಸಿ ಪ್ರೇಮದಿಂದ ಮಂಕು ಮಾಡಿ ನನ್ನ
ಖಡ್ಗದಿ ಯಾಕೆ ನೀ  ಕೊಂದೆ
ನಿನ್ನ ಸುಳ್ಳು ಪ್ರೀತಿಗೆ ಬಲಿ ಆಗಿ ಹೋದೆ
ಉಸಿರಾಡುವ ಹೆಣವಾದೆ |
ನಗುವೇ ದೂರಾಗಿ ದುಖಃವು ಜೊತೆಯಾಗಿ
ಏಕಾಂಗಿ ನಾ ಆಗ್ಹೋದೆ||

                                                   
                              ಆರ್. ಆರ್. ಅಶಾಪುರ್

Wednesday, 10 August 2011

ಸಾವಿನ ಸುತ್ತ

ಬದುಕಿರುವವರೆಗೂ ಸಾವಿನಾ ಚಿಂತೆ
ಹೋಗುವ ಕಾಲಕೆ ಬದುಕಿನ ಚಿಂತೆ
ಹೊತ್ತಿರುವೆವು ನಾವು ಪಾಪ ಪುಣ್ಯಗಳ ಕಂತೆ
ಅದಕೆಲ್ಲ ಉತ್ತರ ಇಲ್ಲೇ ಪಡೆಯಬೇಕಂತೆ ||

ಸಾವಿನಾಚೆಯ ಊರು ಕಂಡವರು ಯಾರು
ಸ್ವರ್ಗ ನರಕಗಳ ಊಹೆಗಳು ನೂರಾರು
ಸ್ವರ್ಗದಾನಂದದಲಿ ಮಿಂದು ಬಂದವರಿಲ್ಲ ಎದುರಿನಲಿ
ನರಕದ ಬೇಗೆಯಲಿ ಬೆಂದು ಬಂದವರಿಲ್ಲ ಆಸು  ಪಾಸಿನಲಿ||

ಸಾವಿನಾ ಸುತ್ತ ಅಂತೆ ಕಂತೆಗಳ ಭೂತ
ಇಲ್ಲಿಹುದು ನನಗೆ ತಿಳಿದಿರುವ ಅರ್ಥ
ಸಾವು ಬಂದಾಗ ನಮ್ಮ ದೇಹ ಕಾಣುವುದು ಅಂತ್ಯ
ಆತ್ಮ ಹುಡುಕುತಾ  ಹೊರಡುವುದು ಹೊಸ ದೇಹದಾ ಸಾಂಗತ್ಯ ||

                                              ಆರ್. ಆರ್. ಅಶಾಪುರ್