Friday 25 November 2011

ಅನಾಥ ಕನಸು

ಕೈಯಲ್ಲಿ ಆಟಿಕೆ ಹಿಡಿದು ತಮ್ಮನ ಜೊತೆ ಆಡಿ
ದಿನವು ಹೊಟ್ಟೆತುಂಬ ಕೈತುತ್ತೂಟವ ಮಾಡಿ 
ಅಮ್ಮನ ಮಡಿಲಲಿ ಬೆಚ್ಚಗೆ ಮಲಗಿದಹಾಗೆ 

ಆಡುವಾಗ ಅಜ್ಜಿ ಎಳೆದೊಯ್ದು ಸ್ನಾನ ಮಾಡಿಸಿ 
ಎಣ್ಣೆ ಹಚ್ಚಿ,ತಲೆ ಬಾಚಿ, ಹೂ ಮುಡಿಸಿ 
ಹಣೆಗೆ ದೃಷ್ಟಿ ಬೊಟ್ಟು ಇಟ್ಟಹಾಗೆ

ಅಪ್ಪನ ಕೈ ಹಿಡಿದು ಜಾತ್ರೆಯಲಿ ಸುತ್ತಾಡಿ 
ಮಿಟಾಯಿ ತಿನ್ನುತ್ತ ಜೋಕಾಲಿಯಲಿ ಆಡಿ 
ಕಂಡ ಕಂಡದ್ದನ್ನು ಕೊಡಿಸು ಎಂದು ಪೀಡಿಸಿ ಏಟು ತಿಂದಹಾಗೆ 

ಹೆಸರು ಚಿಕ್ಕದು ಮಾಡಿ ಪ್ರೀತಿಯಿಂದ ಕೂಗಿ ಬಳಿಗೆ ಕರೆದು 
ತನಗೆಂದು ಕೊಡಿಸಿದ ಗೊಂಬೆಯನ್ನು ನನ್ನ ಕೈಗಿಟ್ಟು
ನನ್ನ ಕಣ್ಣೋರಸಿದ  ಅಣ್ಣ ಹಣೆಗೆ ಮುತ್ತಿಟ್ಟ ಹಾಗೆ 

ಪಾಟಿ,ಪೇಣಿ,ಪುಸ್ತಕ,ಪೆನ್ನು ಇರುವ ಚೀಲ ಹೊತ್ತು 
ಶಾಲೆಯ ಬಟ್ಟೆ  ಉಟ್ಟು  ದಿನವೂ ಶಾಲೆಗೆ ಹೋಗಿ 
ಸ್ನೇಹಿತರ ಗುಂಪಿನಲ್ಲಿ ಆಟ ಆಡಿದ ಹಾಗೆ 

ಆಸೆಗಳ ಮೂಟೆ  ಬಿಚ್ಚಿ ಅಂಗಳಕ್ಕೆ ಹರಡಿ ಕೂತೆ 
ಕನಸುಗಳೆಲ್ಲ ನನಸಾಗಿ ಕಣ್ಣೆದುರು ನಿಂತಂತೆ 
ಕನಸು ಕಂಡೆ  ಅನಾಥ  ಕನಸು ಕಂಡೆ 
                                                    ಆರ್ ಆರ್ ಅಶಾಪುರ್

Friday 4 November 2011

ಮತ್ತೆ ಬಾ ನೀನು

ನಿನ್ನ ದನಿ ಇಲ್ಲದ ಸದ್ದನು
ಕೇಳ ಬಯಸೆನು ನಾನು
ನೀನಲ್ಲದ ಮುಖವನು
ನೋಡ ಬಯಸೆನು ನಾನು

ನಿನ್ನ ಕೈ ನನ್ನ ಕೈಯೋಳಗಿರದೆ
ತುಸು ದೂರವು ನಡೆಯಲಾರೆನು ನಾನು
ನನ್ನ ಜೊತೆ ನೀನಿರದಿದ್ದರೆ
ಸ್ವಲ್ಪವೂ ನಗಲಾರೆ ನಾನು

ನೀನಿಲ್ಲವೆನ್ನುವ ಕಹಿ ಸತ್ಯವ
ನುಂಗಿ ಬದುಕಿರಲಾರೆ ನಾನು
ಸತ್ತವರ ಬದುಕಿಸುವ
ಸಂಜೀವಿನಿಯಾಗಿ ಮತ್ತೆ ಬಾ ನೀನು
                                           ಆರ್ ಆರ್ ಆಶಾಪುರ್