Friday 5 October 2012

ಹೇಳು ಬಾ ಗೆಳತಿ

ಹೇಳು ಬಾ ಗೆಳತಿ
ನೀ ನನಗೆ ಕೊಟ್ಟಿದ್ದು
ಅತಿ ಪ್ರೀತಿಯ ನೆರಳೋ ?
ಹುಸಿ ಪ್ರೇಮದ ಉರುಳೋ?

ದೂರದಲಿ ನೀ  ನಿಂತು ,
ಕಣ್ಣಲ್ಲಿ ಕಣ್ಣಿಟ್ಟು
ಮುದ್ದಾದ ನಗೆ ಬೀರಿ,
ನನ್ನ ಎದೆಯಲ್ಲಿ ಕಾಲಿಟ್ಟು ,
ಮನದಲ್ಲಿ ಮನೆಕಟ್ಟಿ 
ನೀ ನನಗೆ ಕೊಟ್ಟಿದ್ದು
ಅತಿ ಪ್ರೀತಿಯ ನೆರಳೋ ?
ಹುಸಿ ಪ್ರೇಮದ ಉರುಳೋ?

ಸಂಜೆ ಕಡಲ ತೀರದಲಿ,
ಪಕ್ಕದಲಿ ನೀಕುಂತು
ಹೆಗಲಿಗೆ ತಲೆಕೊಟ್ಟು,
ಕೈಯಲ್ಲಿ ಕೈ ಇಟ್ಟು
ನೂರಾರು ಮಾತಾಡಿ
ನೀ ನನಗೆ ಕೊಟ್ಟಿದ್ದು
ಅತಿ ಪ್ರೀತಿಯ ನೆರಳೋ ?
ಹುಸಿ ಪ್ರೇಮದ ಉರುಳೋ?

ಆಣೆಗಳ ಕೈಬಿಟ್ಟು
ಕನಸುಗಳ ಬದಿಗಿಟ್ಟು
ನನಗಿಂತ ಒಳ್ಳೆ ಹುಡುಗಿ
ನಿನಗೆ ಸಿಗಲಿ ಎಂದು ಹೇಳಿ
ನೀ ನನಗೆ ಕೊಟ್ಟಿದ್ದು
ಅತಿ ಪ್ರೀತಿಯ ನೆರಳೋ ?
ಹುಸಿ ಪ್ರೇಮದ ಉರುಳೋ?
                         ಆರ್ ಆರ್ ಅಶಾಪುರ್

Saturday 29 September 2012

ವಿವೇಕ ದೀಪ

ಪರರ ಹೆಗಲ ಭಾರವನು
ಹೋರಲು ಹೆಗಲೊಡ್ಡಿ ನಿಂತಿಹೆವು
ಪರರ ಕಷ್ಟಕ್ಕೆ ಸ್ಪಂದಿಸಲು
ಪಣತೊಟ್ಟು  ನಿಂತಿಹೆವು

ವಿದ್ಯಾವಂತರ ಸೃಷ್ಟಿಯಿಂದಲೇ
ದೇಶದ ಏಳಿಗೆ ಎಂದು ನಂಬಿಹೆವು
ವಿದ್ಯಾವಂಚಿತರಿಗೆ ವಿದ್ಯೆ ಒದಗಿಸಲು
ನಮ್ಮ ಮೊದಲ ಹೆಜ್ಜೆ ಹಾಕಿಹೆವು

ನಮ್ಮ ಈ ಕಾರ್ಯದ ಯಶಸಿಗ್ಗೆ
ದೈವ ನಮ್ಮನ್ನು ಹರಸಲಿ
ನಾವಲ್ಲ ಹಚ್ಚಿರುವ ವಿವೇಕ ದೀಪ
ನಂದಾದೀಪ ವಾಗಲಿ
                           ಆರ್ ಆರ್ ಅಶಾಪುರ್          

Friday 31 August 2012

ನಮ್ಮ ಕನ್ನಡ

ನುಡಿದರೆ ನಾಲಿಗೆಯ
ಪಾಪ ಕಳೆದಂತೆ
ಆಲಿಸಿದರೆ ಕರ್ಣಗಳಿಗೆ
ಪುಣ್ಯ   ದೊರೆತಂತೆ
ಬರೆದರೆ  ಹಸ್ತಕ್ಕೆ 
ಬಲವು  ಬಂದಂತೆ
ಕರುನಾಡಲ್ಲಿ  ಇದ್ದರೆ 
ಸ್ವರ್ಗದಲಿ  ನಿಂತಂತೆ
ಅನ್ಯ  ಭಾಷೆಯ
ಮೋಹಕ್ಕೆ ಸಿಲುಕಿ
ಕನ್ನಡವ ಮರೆಯುವಿರಲ್ಲ
ಏನಿಹುದು ಅವಕೆ?
ವಿಶ್ವದ ಪುರಾತನ
ಭಾಷೆ ಎಂಬ ಹೆಗ್ಗಳಿಕೆ ಕನ್ನಡಕೆ,
ಕನಕದಾಸ ,ಪುರಂದರ ದಾಸರಂತ
ದಾಸ  ಶ್ರೇಷ್ಠರ ಇತಿಹಾಸ ಕನ್ನಡಕೆ ,
ಬಸವಣ್ಣ, ಅಕ್ಕಮ್ಮ ,
ಜೇಡರ
ದಾಸೀಮಯ್ಯ ,
ಅಂಬಿಗರ ಚೌಡಯ್ಯರಂತ
ವಚನಕಾರರ ಹಾರೈಕ ಕನ್ನಡಕೆ,
ತಾಯ್ನುಡಿ ಬೇರೆಯಾದರು,
ಕನ್ನಡದಿ ಬರೆದು ಜ್ಞಾನಪೀಠ ಪಡೆದ
ಕವಿವರ್ಯರ ಬೆಂಬಲವು ಕನ್ನಡಕೆ ,
ಅತಿ ಹೆಚ್ಚು ಜ್ಞಾನಪೀಠ ಪಡೆದ
ದಾಖಲೆಯು ಕನ್ನಡಕೆ , 
ಏನ್ ಹೇಳಲಿ  ಇಂತ ನುಡಿಯ
ಮರೆಯಲೊರಟ ನಿಮ್ಮ
ಸಣ್ ತನಕೆ .
ಎಷ್ಟು ಭಾಷೆಗಳ
ಕಲಿತರೂ ಕೂಡ
ನಮ್ಮ ಕನ್ನಡವ ಮರೆಯುವುದು ಬೇಡ.

                                                ಆರ್.ಆರ್.ಆಶಾಪುರ್

Friday 6 July 2012

ಎಲ್ಲರು ಪ್ರೇಮಿಗಳೇ

ಪ್ರಪಂಚದಲ್ಲಿ ಎಲ್ಲರು ಪ್ರೇಮಿಗಳೇ
ಕೆಲವರು ಮುಗ್ಧ ಪ್ರೇಮಿಗಳು
ಕೆಲವರು ಗುಪ್ತ ಪ್ರೇಮಿಗಳು
ಕೆಲವರು ಭಗ್ನ ಪ್ರೇಮಿಗಳು
ಕೆಲವರು ಲಗ್ನ ಪ್ರೇಮಿಗಳು
 ಉಳಿದವರು ........
ನಗ್ನ ಪ್ರೇಮಿಗಳು

Tuesday 5 June 2012

ಮತ್ತದೇ ಏಕಾಂತ


ಬೆಳದಿಂಗಳ ರಾತ್ರಿಲಿ ನೈದಿಲೆ ನಕ್ಕಾಗ
ತಣ್ಣನೆ ಗಾಳಿಲಿ ಗಿಡಮರ ಕುಣಿದಾಗ
ನಿದ್ದೆಯಲಿ ನಿನ್ನ ದನಿ ಕೇಳಿಸಿ ಕಣ್ ತೆರೆದಾಗ
ಅದೇ ನಿನ್ನ ನೆನಪು, ಮತ್ತದೇ ಏಕಾಂತ.

ಹಳೆಯ ದಿನಗಳು ಕನಸಾಗಿ ಬಂದಾಗ
ಕನಸಲ್ಲೇ ಮುಳುಗಿ ನಾ ಕಳೆದು ಹೋದಾಗ
ನಿದ್ದೆಯಲಿ ಮುಖದಿ ಮಂದಹಾಸ ಮೂಡಿದಾಗ
ಅದೇ ನಿನ್ನ ನೆನಪು, ಮತ್ತದೇ ಏಕಾಂತ.

ಕಾರಣವಿರದೆ ದೂರವಾದ ವಿಷಯ ಮನಕೊರೆಯುವಾಗ
ಕಾರಣವ ಯೋಚಿಸಿ ನಾ ಸೋತು ಹೋದಾಗ
ಕಣ್ಣೀರೆ ಕೆನ್ನೆಯಲಿ ಮನೆಮಾಡಿಕೊಂಡಾಗ
ಅದೇ ನಿನ್ನ ನೆನಪು, ಮತ್ತದೇ ಏಕಾಂತ.
                                               ಆರ್ ಆರ್ ಆಶಾಪುರ್




Saturday 31 March 2012

ಮತದಾನ

ಸಾರಾಯಿ ಪಡೆದ ಋಣ ದಿಂದ
ಒಟ್ ಹಾಕಿ ಮುಕ್ತಗೊಂಡೆ
ನೀರು ಬರದೆ ವರುಷವಾಯ್ತು
ದನಿಯೆತ್ತಿ ಕೇಳೋ
ಅಧಿಕಾರ  ಕಳೆದುಕೊಂಡೆ

ಬಿರಿಯಾನಿ ಪೊಟ್ಟಣವ ಕೊಟ್ಟವಗೆ
ಮತ ಒತ್ತಿ ನೀಯತ್ತು ತೋರಿಸಿದೆ
ತುತ್ತು ಅನ್ನ ಸಂಪಾದನೆ
ಕಷ್ಟವಾಗಿದೆ ಇಂದು
ಕಷ್ಟ ಕೇಳುವ ಕಿವಿ ಕಿವುಡಾಗಿವೆ

ಮನೆಬಾಗಿಲಿಗೆ ಬಂದು ಕೈ ಮುಗಿದು
ಕಾಲು ಹಿಡಿದವಗೆ ಮತ ದಾನ ಮಾಡಿ
ಸಹಾನುಭೂತಿ ತೋರಿಸಿದೆ
ಈಗ ಭೂತವಾಗಿ ಕಾಡಿಹನು
ಎದುರಿಸಿ ನಿಲ್ಲುವ ಶಕ್ತಿ ಕಳೆದುಕೊಂಡೆ

ಕಂಡಕಂಡಲ್ಲಿ ತಿಂದು ಕುಡಿದು
ಬಂದೆ ಕಂಡವರಿಗೆ ಮತ ಹಾಕಿ
ನಿತ್ಯದ ಅವಶ್ಯಕತೆಗಳ
ಕಾಣದೆ ಬದುಕಿರುವೆ
ಬಾಯಲ್ಲಿ ಮಣ್ಣು ಬಿಳುವುದೊಂದೇ ಬಾಕಿ
                                        ಆರ್ ಆರ್ ಆಶಾಪುರ್