Friday, 25 November 2011

ಅನಾಥ ಕನಸು

ಕೈಯಲ್ಲಿ ಆಟಿಕೆ ಹಿಡಿದು ತಮ್ಮನ ಜೊತೆ ಆಡಿ
ದಿನವು ಹೊಟ್ಟೆತುಂಬ ಕೈತುತ್ತೂಟವ ಮಾಡಿ 
ಅಮ್ಮನ ಮಡಿಲಲಿ ಬೆಚ್ಚಗೆ ಮಲಗಿದಹಾಗೆ 

ಆಡುವಾಗ ಅಜ್ಜಿ ಎಳೆದೊಯ್ದು ಸ್ನಾನ ಮಾಡಿಸಿ 
ಎಣ್ಣೆ ಹಚ್ಚಿ,ತಲೆ ಬಾಚಿ, ಹೂ ಮುಡಿಸಿ 
ಹಣೆಗೆ ದೃಷ್ಟಿ ಬೊಟ್ಟು ಇಟ್ಟಹಾಗೆ

ಅಪ್ಪನ ಕೈ ಹಿಡಿದು ಜಾತ್ರೆಯಲಿ ಸುತ್ತಾಡಿ 
ಮಿಟಾಯಿ ತಿನ್ನುತ್ತ ಜೋಕಾಲಿಯಲಿ ಆಡಿ 
ಕಂಡ ಕಂಡದ್ದನ್ನು ಕೊಡಿಸು ಎಂದು ಪೀಡಿಸಿ ಏಟು ತಿಂದಹಾಗೆ 

ಹೆಸರು ಚಿಕ್ಕದು ಮಾಡಿ ಪ್ರೀತಿಯಿಂದ ಕೂಗಿ ಬಳಿಗೆ ಕರೆದು 
ತನಗೆಂದು ಕೊಡಿಸಿದ ಗೊಂಬೆಯನ್ನು ನನ್ನ ಕೈಗಿಟ್ಟು
ನನ್ನ ಕಣ್ಣೋರಸಿದ  ಅಣ್ಣ ಹಣೆಗೆ ಮುತ್ತಿಟ್ಟ ಹಾಗೆ 

ಪಾಟಿ,ಪೇಣಿ,ಪುಸ್ತಕ,ಪೆನ್ನು ಇರುವ ಚೀಲ ಹೊತ್ತು 
ಶಾಲೆಯ ಬಟ್ಟೆ  ಉಟ್ಟು  ದಿನವೂ ಶಾಲೆಗೆ ಹೋಗಿ 
ಸ್ನೇಹಿತರ ಗುಂಪಿನಲ್ಲಿ ಆಟ ಆಡಿದ ಹಾಗೆ 

ಆಸೆಗಳ ಮೂಟೆ  ಬಿಚ್ಚಿ ಅಂಗಳಕ್ಕೆ ಹರಡಿ ಕೂತೆ 
ಕನಸುಗಳೆಲ್ಲ ನನಸಾಗಿ ಕಣ್ಣೆದುರು ನಿಂತಂತೆ 
ಕನಸು ಕಂಡೆ  ಅನಾಥ  ಕನಸು ಕಂಡೆ 
                                                    ಆರ್ ಆರ್ ಅಶಾಪುರ್

Friday, 4 November 2011

ಮತ್ತೆ ಬಾ ನೀನು

ನಿನ್ನ ದನಿ ಇಲ್ಲದ ಸದ್ದನು
ಕೇಳ ಬಯಸೆನು ನಾನು
ನೀನಲ್ಲದ ಮುಖವನು
ನೋಡ ಬಯಸೆನು ನಾನು

ನಿನ್ನ ಕೈ ನನ್ನ ಕೈಯೋಳಗಿರದೆ
ತುಸು ದೂರವು ನಡೆಯಲಾರೆನು ನಾನು
ನನ್ನ ಜೊತೆ ನೀನಿರದಿದ್ದರೆ
ಸ್ವಲ್ಪವೂ ನಗಲಾರೆ ನಾನು

ನೀನಿಲ್ಲವೆನ್ನುವ ಕಹಿ ಸತ್ಯವ
ನುಂಗಿ ಬದುಕಿರಲಾರೆ ನಾನು
ಸತ್ತವರ ಬದುಕಿಸುವ
ಸಂಜೀವಿನಿಯಾಗಿ ಮತ್ತೆ ಬಾ ನೀನು
                                           ಆರ್ ಆರ್ ಆಶಾಪುರ್

Monday, 26 September 2011

ಬಿಡುವು ಕೊಡದೆ ಕಾಡಿದೆ.

ನಿನ್ನ ಬಳೆಯ ನಾದಕೆ
ಮನಸು ತಾಳ ಹಾಕಿದೆ
ನಿನ್ನ ಕಾಲ್ಗೆಜ್ಜೆಯ ಸದ್ದಿಗೆ
ಹೃದಯ ಹೆಜ್ಜೆ ಹಾಕಿದೆ

ತುಟಿ ಅಂಚಿನ ಮುಗುಳ್ನಗೆ
ಕಣ್ಣ  ತುಂಬಾ ತುಂಬಿದೆ
ನಿನ್ನ ಮಧುರ ದ್ವನಿ ಅದು
ಕಿವಿಯ ಒಳಗೆ ಗುನುಗಿದೆ

ಊಟ ನನ್ನ ಮೇಲೆ ಮುನಿದು
ನಿದುರೆ ದೂರ ತಳ್ಳಿದೆ
ಹಗಲು ಇರುಳು ನಿನ್ನ ನೆನಪು
ಬಿಡುವು ಕೊಡದೆ ಕಾಡಿದೆ.
                            ಆರ್.ಆರ್.ಆಶಾಪುರ್

Tuesday, 20 September 2011

ಹೇಗೆ ಬುದ್ದಿ ಹೇಳಲಿ ?

ವಯಸು ಹದಿನಾರಾಗಿದೆ,ಹರೆಯ ಬಂದು ಕಾಡಿದೆ
ನನ್ನ ಮಾತೇ ಕೇಳದೆ ಮನಸು ಹಿಡಿತ ತಪ್ಪಿದೆ
ಅಂಕೆ ಇರದ  ಅಶ್ವಕೆ ಹೇಗೆ ಕಡಿವಾಣ ಹಾಕಲಿ
ನನ್ನೇ ಮರೆತ ಮನಸಿಗೆ ಹೇಗೆ ಬುದ್ದಿ ಹೇಳಲಿ

ದಿನವು ಪೇಟೆ ಬೀದಿಲಿ ನನ್ನ ದಾರಿ ಕಾಯುವ
ನನ್ನ ಬೆನ್ನ ಹಿಂದೆಯೇ ಕದ್ದು ಮುಚ್ಚಿ ಬರುತಿಹ
ಅವನೆಡೆ ಮನಸು  ಜಾರಿದೆ ನನಗೆ ಸುಳಿವೇ ನೀಡದೆ

ಶಾಲೆ ಬಿಡುವ ಸಮಯಕೆ ಗೇಟಿನಲ್ಲಿ ನಿಂತಿರೋ
ದೊಡ್ಡ ಗುಂಪಿನಲ್ಲಿಯು ನನ್ನೇ ಹುಡುಕಿ ನೋಡಿರೋ
ಅವನೆಡೆ ಸಾಗಿದೆ ಮನಸು ಹಿಂದೆ ತಿರುಗಿ ನೋಡದೆ

ನನ್ನ ಮಾತೇ ಕೇಳದೆ ಮನಸು ಹಿಡಿತ ತಪ್ಪಿದೆ
ನನ್ನೇ ಮರೆತ ಮನಸಿಗೆ ಹೇಗೆ ಬುದ್ದಿ ಹೇಳಲಿ
                                 ಆರ್. ಆರ್. ಅಶಾಪುರ್

Monday, 12 September 2011

ನೆನಪು

ಕಷ್ಟಗಳನ್ನೆದುರಿಸಿ ನೊಂದ  ದಿನಗಳ
ನೋವು ತುಂಬಿದ ಘಟನೆಗಳ
ಮಾಸಿಹೋದ ಗಾಯಗಳ
ಕೆದುಕಿ ನೋಯಿಸುವುದು ನೆನಪು

ಕಳೆದು ಹೋದ  ಸಂಬ್ರಮದ ಕ್ಷಣಗಳ
ಉಲ್ಲಾಸವ ತಂದ ವಿಷಯಗಳ
ಮರೆಯಾದ ಮಂದಹಾಸಗಳ
ಪುನಹ ಹೊತ್ತುತರುವುದು ನೆನಪು

ಗತಕಾಲದ ನೋವುನಲಿವಿನ ಸಂಗತಿಗಳ
ಕ್ಷಣಾರ್ದದಲಿ  ಕಣ್ಣೆದುರು ತಂದಿಟ್ಟು
ವರ್ತಮಾನದಿಂದ ಬದಿಗೊತ್ತಿ ನಮ್ಮನು
ಭೂತಕಾಲಕ್ಕೆ ಕರೆದೊಯ್ಯುವುದು ನೆನಪು
                 
                                ಆರ್. ಆರ್. ಅಶಾಪುರ್

Friday, 9 September 2011

ನೆಮ್ದಿ ಕೊಡೋರ್ ಯಾರು ?

ದುಡ್ಡು ಐತೆ ಬಂಗ್ಲೆ ಐತೆ ಓಡಾಡೋಕೆ ಕಾರು
ಇಷ್ಟೆಲ್ಲಿದ್ರು ನಿನ್ ಮನ್ಸಿಗ್  ನೆಮ್ದಿ ಕೊಡೋರ್ ಯಾರು ?

ಭಂದ್ಗುಳ್ ಎದ್ರಿಗ್ ಬಂದ್ರೆ ಮಾತಾಡ್ತಾರ್ ಹಲ್ಲು ಕಿರ್ದು
ಮುಂದುಕ್ ಹೊದ್ಮೆಲ್ ಬೈಕೊತಾರ್ ಬಿನ್ನಿಗ್ ತಿವ್ದು ತಿವ್ದು
ಹಬ್ಬ ಔತ್ಣ ಏನೇ ಇರ್ಲಿ ಬರ್ತಾರ್ ರೆಡಿಯಾಗಿ
ಕಷ್ಟದಲ್ಲಿ ಸಹಾಯ ಕೇಳಿದ್ರೆ  ಅಂತಾರ್  ದೂರ ಹೋಗಿ

ಸ್ನೇಹಿತ್ರೆಲ್ಲ ಜೊತೆಗೆ ಅನ್ನೋದ್ ಓದೋವರ್ಗು ಅಷ್ಟೇ
ಕೆಲ್ಸಾ ಸಿಕ್ಮೆಲ್  ದೂರಾಗ್ಬೇಕು ಈ ದುನಿಯಾದ ಕಥೆ ಇಷ್ಟೇ
ಭೂಮಿಮೇಲೆ ಒಳ್ಳೆ ದೊಸ್ತ್ರು ಸಿಗೋದ್ ಕಷ್ಟ ತಮ್ಮ
ಸಿಕ್ರುನೂವೆ ಜೊತೇಲ್ ಇರೊಂಗ್ ಬರಿಯಲ್ಲ ಆ ಬ್ರಮ್ಮ

ತಂದೆ ತಾಯಿ ಪ್ರೀತಿಯಲ್ಲ ಮದ್ವೆ ಆಗೋ ಗಂಟ
ಮದ್ವೆ ಆದ್ಮೇಲ್ ಅಂತಿರ್ತಾರೆ ಮಗ ಬದ್ಲಾಗ್ಬಿಟ್ಟ
ಹೆಂಡ್ತಿ ಪರ್ವಾಗ್ ಮಾತಾಡಿದ್ರೆ ಇವ್ರಿಗ್ ಹಿಡ್ಸಕಿಲ್ಲ
ಹಂಗಂತೇಳಿ ಅವ್ರ್ಕಡೆ ಹೋದ್ರೆ ಇವ್ಳು ಸುಮ್ನಿರಾಕಿಲ್ಲ

ಹಿಂಗಿರ್ವಾಗ ನೆಮ್ದಿಯಿಂದ ಹೆಂಗಿರ್ತೈತಿ ಬಾಳು
ನೆಮ್ದಿ ಇಲ್ದೆ ಕಾರು ಬಂಗ್ಲೆ ಇಟ್ಗಂಡ್ ಏನ್ ಮಾಡ್ತಿ ಹೇಳು
ಕಾಲಕ್ ತಕ್ಕಂಗ್ ನಡಿಲೇಬೇಕು ಅನ್ನೋ ಮಾತು ನಿಜ
ಸಂಭಾದನ್ನೋ ಕಾಲು ಮುರುದ್ರೆ ನಡಿಯೋದೆಂಗೆ ಮನುಜ ?

                                             ಆರ್. ಆರ್. ಅಶಾಪುರ್

 (ಆಡು ಭಾಷೆಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಿ )

Wednesday, 7 September 2011

ಕಣ್ಣೋಟ

ನನ್ನ ಮನದಲಿ ಮನೆ ಮಾಡಿದೆ
ಮನೆಗೆ ನಂದಾದೀಪವಾದೆ
ನಿನ್ನ ಒಂದೇ ನೋಟದಲಿ

ಪ್ರೇಮ ವಿಜ್ಞಾಪನೆಗೆಂದು
ನಿಂತೇ ನಿನ್ನೆದುರು ಬಂದು
ಭಯದಿ ಮಾತೆಲ್ಲ ಮರೆತು
ನಿನ್ನ ಮೋಹಕ ಕಣ್ಣೋಟಕೆ ನಾನು ಸೋತು
ಎಲ್ಲೋ ಕಳೆದ್ಹೋದೆ ನನ್ನ ನಾ ಮರೆತು

ನಾನು ನಿನ್ನೆದುರು ಬಂದು
ಮನದಾಸೆ ಹೇಳಲಾಗದೆಂದು
ತಂದಿರುವೆ ಕಣ್ಣಂಚಲ್ಲಿ  ಬರೆದು
ನೀ ಓದುವವರೆಗೂ ರೆಪ್ಪೆ ಮಿಟುಕಿಸೆನು ಈಗ
ಓದಿ ಕಂಗಳಿಗೆ ವಿಶ್ರಾಂತಿ ನೀಡು ಬೇಗ 
                                        
                                        ಆರ್. ಆರ್. ಅಶಾಪುರ್

Tuesday, 30 August 2011

ಗೆಳೆಯನ ನೆನಪು

ಸದ್ದು ನಿದ್ದೆಹೋಗಿ ಮೌನ ಎದ್ದು ನಿಂತಿತ್ತು
ಅಂಧಕಾರವು ಬೆಳಕನ್ನು ಮೆಟ್ಟಿ ನಿಂತಿತ್ತು
ಮನಸಿಗೆ ಮಂಕು ಕವಿದು ಸುಮ್ಮನೆ ಮಲಗಿತ್ತು
ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು .

ಗೆಳೆಯನ ನೆನಪುಗಳು  ಮನ ಕಲಕುತಿತ್ತು
ಆಡಿ ನಲಿದ ದಿನಗಳು ಕಣ್ಣೆದುರು ನಿಂತಿತ್ತು
ಮನಸ್ಸು ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿತ್ತು
ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು .

ಬರಸಿಡಿಲು ಎದೆಗೆ ಅಪ್ಪಳಿಸಿದಂತಿತ್ತು
ಬಿರುಗಾಳಿಗೆ ಸಿಲುಕಿ ತತ್ತರಿಸಿದಂತಿತ್ತು
ಗೆಳೆಯನಿಲ್ಲದ ಜೀವನ ಇನ್ನೇಕೆ ಎಂದೆನ್ನಿಸಿತ್ತು
ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು
                                             ಆರ್. ಆರ್. ಅಶಾಪುರ್

Friday, 26 August 2011

ಇಂದಾದರು ನೀನು ಬರಬಾರದೇನು

ಬೆಳದಿಂಗಳ ಬಾನಲ್ಲಿ ಕಂಡ ಚಂದ್ರ ಮುಖಿ
ಕನಸಲ್ಲಿ ನಗುತ ಕಾಡುವ ಹಸನ್ಮುಖಿ
ಕಣ್ಣೆದುರು ಎಂದು ಬರುವೆ ನನ್ನ ಪ್ರಾಣ ಸಖಿ

ಸೂರ್ಯ ಮುಳುಗುವ ಹೊತ್ತು
ಇಬ್ಬರು ಜೊತೆಯಾಗಿ ಕೂತು
ಆಡೋಣ ನೂರೆಂಟು ಮಾತು
ಎಂದು ಕನಸಲ್ಲಿ ನೀ ನನಗಿತ್ತ ಮಾತು
ನಂಬಿ ನಿನ್ನ ದಾರಿ ಕಾದಿರುವೆ ನಾನು
ಇಂದಾದರು ನೀನು ಬರಬಾರದೇನು

ಮಳೆ ಸುರಿಯುವ ಸಮಯ
ನಾ ಬಂದು ನಿನ್ನ  ಸನಿಹ
ತಿಳಿಸುವೆ ಮನದ ಬಯಕೆಯ
ಎಂದು ಕನಸಲ್ಲಿ ನೀ ಕೊಟ್ಟ ಭಾಷೆಯ
ನಂಬಿ ನಿನ್ನ ದಾರಿ ಕಾದಿರುವೆ ನಾನು
ಇಂದಾದರು ನೀನು ಬರಬಾರದೇನು

                                         ಆರ್. ಆರ್. ಅಶಾಪುರ್

Monday, 22 August 2011

ಸ್ವತಂತ್ರ ಭಾರತ

ಸ್ವತಂತ್ರ ಭಾರತಕ್ಕೆ ಅರವತ್ನಾಲ್ಕು ವರುಷ
ಇನ್ನೂ ಬಿಸಿಲು ಕುದುರೆಯಂತಿದೆ  ಜನರ ಬದುಕಲ್ಲಿ ಹರುಷ |

ನಾಯಕರ ಹುಸಿ ಭರವಸೆ ಯಿಂದ ದುಃಖ ಅತಿಯಾಗಿದೆ 
ಸಮುದ್ರದಂತ ಪ್ರತಿ ಕಣ್ಣಲ್ಲಿ ಕಣ್ಣೀರೆ ಅಲೆಯಾಗಿದೆ
ದುಷ್ಟ ನಾಯಕರು ಕೊಚ್ಚಿಹೋಗುವಂತೆ
ಸಮುದ್ರದಾಳದಿಂದ ಸುನಾಮಿ ಹೊರಬೀಳಬೇಕಿದೆ ||

ದೇಶದೆಲ್ಲೆಡೆ ಬ್ರಷ್ಟತೆಯ ಕಂಡು ಮನಗಳು  ನೊಂದಿವೆ 
ಬೆಂಕಿಉಂಡೆಯಂತ ಮನಗಳಲ್ಲಿ  ನಿಟ್ಟುಸಿರೆ ಜ್ವಾಲೆ ಯಾಗಿದೆ
ಬ್ರಷ್ಟ ನಾಯಕರು ಸುಟ್ಟು ಹೋಗುವಂತೆ
ಜ್ವಾಲೆ ಜ್ವಾಲೆಯಿಂದ ಬೆಂಕಿ ಮಳೆ ಸುರಿಯಬೇಕಿದೆ  ||
                                   
                                       ಆರ್ ಆರ್ ಆಶಾಪುರ್

Tuesday, 16 August 2011

ಸಮಾನತೆಯ ಆಸೆ


ಜಗಕೆ ಅರಿವೆಂಬ ಮಳೆಸುರಿದು
ಜನರ ಮಸ್ತಕದಿ ಜಿನುಗಲಿ
ಅಸಮಾನತೆಯ ಕಳೆ ತೆಗೆದು
ಸಮಾನತೆಯ ಬೆಳೆ ಬೆಳೆಯಲಿ ||

ಅತಿವೃಷ್ಟಿ ಯಾಗಿ ಅಂತಸ್ತು ಕರಗಿ
ನಗನಾಣ್ಯವೆಲ್ಲ ಹರಿದಂಚಿ ಹೋಗಿ
ಬರಡಾದ ಬಡವನಂಗಳದಿ
ಸಿರಿತನದ ಮೊಳಕೆ ಹೊಡೆಯಲಿ ||

ಜಾತಿಬೇದವು ನೆರೆಯಲ್ಲಿ ಮುಳುಗಿ
ಮೂಢಾಚಾರವು ನೀರಲ್ಲಿ ಕರಗಿ
ರಸಋಷಿಯ ವಿಶ್ವಮಾನವ ಕನಸು
ಇಂದಿಗಾದರು ನನಸಾಗಲಿ ||

                                ಆರ್. ಆರ್. ಅಶಾಪುರ್

Thursday, 11 August 2011

ಸುಳ್ಳು ಪ್ರೀತಿ

ಸಂತೋಷದ  ನನ್ನ ಬದುಕಿನಲಿ
ಪ್ರೀತಿ ಮಾಡಿ ನಾ ಹಾಳಾದೆ
ನಗುವೇ ದೂರಾಗಿ ದುಖಃವು ಜೊತೆಯಾಗಿ
ಏಕಾಂಗಿ ನಾ ಆಗ್ಹೋದೆ ||

ಎಲ್ಲಿಂದ್ಲೋ ನೀನು ಸನಿಹಕೆ ಬಂದು
ಪ್ರೀತಿಯ ಖಡ್ಗವ ತಂದೆ
ಹುಸಿ ಪ್ರೇಮದಿಂದ ಮಂಕು ಮಾಡಿ ನನ್ನ
ಖಡ್ಗದಿ ಯಾಕೆ ನೀ  ಕೊಂದೆ
ನಿನ್ನ ಸುಳ್ಳು ಪ್ರೀತಿಗೆ ಬಲಿ ಆಗಿ ಹೋದೆ
ಉಸಿರಾಡುವ ಹೆಣವಾದೆ |
ನಗುವೇ ದೂರಾಗಿ ದುಖಃವು ಜೊತೆಯಾಗಿ
ಏಕಾಂಗಿ ನಾ ಆಗ್ಹೋದೆ||

                                                   
                              ಆರ್. ಆರ್. ಅಶಾಪುರ್

Wednesday, 10 August 2011

ಸಾವಿನ ಸುತ್ತ

ಬದುಕಿರುವವರೆಗೂ ಸಾವಿನಾ ಚಿಂತೆ
ಹೋಗುವ ಕಾಲಕೆ ಬದುಕಿನ ಚಿಂತೆ
ಹೊತ್ತಿರುವೆವು ನಾವು ಪಾಪ ಪುಣ್ಯಗಳ ಕಂತೆ
ಅದಕೆಲ್ಲ ಉತ್ತರ ಇಲ್ಲೇ ಪಡೆಯಬೇಕಂತೆ ||

ಸಾವಿನಾಚೆಯ ಊರು ಕಂಡವರು ಯಾರು
ಸ್ವರ್ಗ ನರಕಗಳ ಊಹೆಗಳು ನೂರಾರು
ಸ್ವರ್ಗದಾನಂದದಲಿ ಮಿಂದು ಬಂದವರಿಲ್ಲ ಎದುರಿನಲಿ
ನರಕದ ಬೇಗೆಯಲಿ ಬೆಂದು ಬಂದವರಿಲ್ಲ ಆಸು  ಪಾಸಿನಲಿ||

ಸಾವಿನಾ ಸುತ್ತ ಅಂತೆ ಕಂತೆಗಳ ಭೂತ
ಇಲ್ಲಿಹುದು ನನಗೆ ತಿಳಿದಿರುವ ಅರ್ಥ
ಸಾವು ಬಂದಾಗ ನಮ್ಮ ದೇಹ ಕಾಣುವುದು ಅಂತ್ಯ
ಆತ್ಮ ಹುಡುಕುತಾ  ಹೊರಡುವುದು ಹೊಸ ದೇಹದಾ ಸಾಂಗತ್ಯ ||

                                              ಆರ್. ಆರ್. ಅಶಾಪುರ್

Thursday, 28 July 2011

ನಮ್ಮೊಂದಿಗಿದ್ದು ನಮ್ಮಂತಾಗದವರು...


ಹೊಟ್ಟೆಪಾಡಿಗಾಗಿ ಶಾಲೆಯ ಮರೆತವರು
ನಮ್ಮೊಂದಿಗಿದ್ದು ನಮ್ಮಂತಾಗದವರು

ಸಂದಿ ಗುಂದಿಯಲ್ಲಿ ಚಿಂದಿ ಗಿಂದಿ ಆಯ್ದು
ತಿಪ್ಪೆ ಗೊಂಡಿಯಲ್ಲಿ ಎಂಜಲನ್ನು ತಿಂದು
ದೊಡ್ಡ ದೊಡ್ಡ ಮೂಟೆ ಹೆಗಲಮೇಲೆ ಹೊತ್ತು
ಮಳೆ ಬಿಸಿಲಿನಲ್ಲಿ ಬೀದಿಯಲ್ಲಿ ನಿಂತು
ಹೊಟ್ಟೆಪಾಡಿಗಾಗಿ ಶಾಲೆಯ ಮರೆತವರು
ನಮ್ಮೊಂದಿಗಿದ್ದು ನಮ್ಮಂತಾಗದವರು||

ಸೂರ್ಯ ಹುಟ್ಟೋ ಮುಂಚೆ ಹಾಲು ಪ್ಯಾಕೆಟ್ ಹಾಕಿ
ದಿನವು ಸೈಕಲ್ ಹತ್ತಿ ಪೇಪರನ್ನು ಹಾಕಿ
ಅಂಗಡಿ ಮನೆಯಲ್ಲಿ ಕಸ ಮುಸುರೆ ಮಾಡಿ
ಗ್ಯಾರೇಜ್ ಹೋಟಲ್ ನಲ್ಲಿ ಕೂಲಿ ನಾಲಿ ಮಾಡಿ
ಹೊಟ್ಟೆಪಾಡಿಗಾಗಿ ಶಾಲೆಯ ಮರೆತವರು
ನಮ್ಮೊಂದಿಗಿದ್ದು ನಮ್ಮಂತಾಗದವರು||
                                          ಆರ್. ಆರ್. ಅಶಾಪುರ್

Wednesday, 8 June 2011

ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲಿ

ಶಾಲೆಯಲ್ಲಿ, ಕಾಲೇಜಿನಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ, ಕೀಟಲೆ ಮಾಡುತ್ತ, ನಕ್ಕು ನಲಿಯುತ್ತ, ಮೋಜು ಮಸ್ತಿ ಮಾಡುತ್ತ ಇದ್ದಾಗ ತಿಳಿಯದ ಸ್ನೇಹದ ಬೆಲೆ ,ಒಂಟಿಯಾಗಿ ಕಾಲೇಜಿನ ಕಡೆಗೆ ಹೊರಟಾಗ, ಮನಸ್ಸು ತನ್ನಷ್ಟಕ್ಕೆ ತಾನೆ ಕಳೆದ ಅ ಕ್ಷಣಗಳನ್ನು ನೆನೆದು ನನ್ನ ಕಣ್ಣುಗಳು ವದ್ದೆಯಾದಾಗ ತಿಳಿಯಿತು.

ನಾವು ನಮ್ಮ ಬಿಡುವಿಲ್ಲದ ಕೆಲಸದಲ್ಲಿ ಸಿಲುಕಿ,  ಸ್ನೇಹಿತರನ್ನು ಕಾಣಲು,ಕಾಲ್ ಅಥವಾ ಮೆಸೇಜ್   ಮಾಡಲು  ಸಮಯವಿಲ್ಲದಿರಬಹುದು. ಆದರೆ ನಮಗೆ ಸ್ನೇಹಿತರ ನೆನಪಾಗದ ದಿನಗಳು ಮಾತ್ರ ಇಲ್ಲ. ಆಫೀಸ್ ಗೆ ಹೋಗುವ  ದಾರಿಯಲ್ಲಿ ಸ್ನೇಹಿತರ ಗುಂಪು ಕಂಡಾಗ, ಕಾಲೇಜ್ ಬಸ್ಗಳನ್ನು ಕಂಡಾಗ, ಬೈಕ್ ನಲ್ಲಿ ಮೂರು ಜನ ಕಲಾಜ್ ಸ್ಟುಡೆಂಟ್ಸ್ ಕೂತು ಹೋಗುವುದನ್ನು ಕಂಡಾಗ,ಪಕ್ಕದ ಮನೆಯಲ್ಲಿ ಯಾರೋ ಪರೀಕ್ಷೆಗೆಂದು ಗಟ್ಟಿಯಾಗಿ ಓದುತ್ತಿರುವುದು ಕೇಳಿಸಿದಾಗ, ಮನೆಯಲ್ಲಿ ಒಂಟಿಯಾಗಿ ಕೂತಾಗ ನೆನಪಾಗುವುದು ಮತ್ಯಾರು  ಅಲ್ಲ, ಖಾಲಿ ಪುಟದಂತಿದ್ದ ಜೀವನವನ್ನು  ಮಧುರವಾದ ನೆನಪುಗಳಿಂದ ಭರ್ತಿ ಮಾಡಿದ   ಆ ನನ್ನ ಸ್ನೇಹಿತರು.
                                                                                       ಆರ್. ಆರ್. ಅಶಾಪುರ್